ಲರ್ಮನ್‍ಟಾಫ್, ಮಿಖೇಲ್ ಯೂರಿಯೆವಿಚ್
1814-41. ರಷ್ಯನ್ ಕವಿ ಹಾಗೂ ಕಾದಂಬರಿಕಾರ. ರಷ್ಯದ ಮನೋವಿಶ್ಲೇಷಣಾತ್ಮಕ ಕಾದಂಬರಿಗಳ ಜನಕ. ರಷ್ಯನ್ ಕಾವ್ಯ ಕ್ಷೇತ್ರದಲ್ಲಿಯೂ ಇವನು ಅಪೂರ್ವ ರೊಮ್ಯಾಂಟಿಕ್ ದರ್ಶನವನ್ನು ನಿರೂಪಿಸಿದ್ದಾನೆ. ಭಾವಾತಿರೇಕ ಹಾಗೂ ಶಬ್ದಾಡಂಬರಗಳು ಇವನ ಕೃತಿಗಳಲ್ಲಿ ಹೆಚ್ಚು. ಬೈರನ್ ಕವಿಯ ಮಾರ್ಗವನ್ನು ಅನುಸರಿಸಿದ ಕವಿಗಳಲ್ಲಿ ಈತ ಶ್ರೇಷ್ಠನಾದವ. ಸಮತೂಕದ ಮನಸ್ಸು ಹಾಗೂ ವಾಸ್ತವಿಕತೆ ಗಳು ಇವನ ಕೃತಿಗಳಲ್ಲಿ ಎದ್ದು ಕಾಣುವ ಅಂಶಗಳಾಗಿವೆ. ಸ್ವಾತಂತ್ರ್ಯವಿಲ್ಲದೆ ನೆಲೆ ತಪ್ಪುವ ವ್ಯಕ್ತಿಯ ಆಂತರ್ಯದ ಒಂಟಿತನದ ಭಾವನೆಗಳನ್ನು ಶಕ್ತವಾಗಿ ನಿರೂಪಿಸುವ ದೋಸ್ತಯೆಫ್‍ಸ್ಕಿಯ ಕಾದಂಬರಿಗಳ ಮುನ್ಸೂಚನೆಗಳು ಇವನಲ್ಲಿಯೇ ಕಾಣಿಸಿಕೊಳ್ಳುತ್ತವೆ. ದ ಡೆಮನ್, ಇಸ್ಮೈಲ್ ಬೇ, ವಲೇರಿಕ, ದ ನೋವಿಸ್, ದ ಸಾಂಗ್ ಆಫ್ ದ ಜಾರ್ ಐವಾನ್‍ವ್ಯಾಸಿಲಿಯೆವಿಚ್-ಇವು ಇವನ ಕೆಲವು ಪ್ರಸಿದ್ಧ ಕವಿತೆಗಳು. ಇವನ ಡೆಮನ್ (1829-39) ಎಂಬ ಕವನದ ಶಬ್ದಮಾಧುರ್ಯ, ಮಾಂತ್ರಿಕತೆಗಳು ಅಸಾಧಾರಣವಾದುದು. ಈತನ ಎ ಹೀರೊ ಆಫ್ ಅವರ್ ಟೈಮ್ಸ್ (1840) ಎಂಬ ಕಾದಂಬರಿ ಬಹಳ ಪ್ರಸಿದ್ಧವಾದುದು. ಈ ಕೃತಿ ರಷ್ಯದಲ್ಲಿ ಮನ್ನಣೆಗೆ ಪಾತ್ರವಾಗಿದೆ. ಈ ಕಾದಂಬರಿಯ ನಾಯಕ ಆದರ್ಶವಾದದೊಡನೆ ಬೌದ್ಧಿಕ ಸಂಶಯ ಪ್ರವೃತ್ತಿ ಬೆರೆತ ದ್ವಂದ್ವ ವ್ಯಕ್ತಿತ್ವವುಳ್ಳವನು, ಕವಿಯ ಆತ್ಮವುಳ್ಳವನು, ಮಿತಭಾಷಿ, ಸಂಕೋಚ ಸ್ವಭಾವ ಹಾಗೂ ಶ್ರೀಮಂತಿಕೆಯ ಬಗೆಗೆ ತಿರಸ್ಕಾರ ಮನೋಭಾವಗಳಿಂದ ಒರಟನಂತೆ ವರ್ತಿಸುತ್ತಾನೆ. ಈ ಕಾದಂಬರಿ ಆದರ್ಶ ಹಾಗೂ ವಾಸ್ತವದ ಸಂಘರ್ಷವನ್ನು ಚಿತ್ರಿಸುತ್ತದೆ.		
	(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ